ಮಲಕ್ಕ ಜಲಸಂಧಿ -
ಮಲಯಾ ಪರ್ಯಾಯ ದ್ವೀಪದ ಪಶ್ಚಿಮಕ್ಕೂ ಸುಮಾತ್ರದ್ವೀಪದ ಪೂರ್ವಕ್ಕೂ ಇರುವ ಜಲಸಂಧಿ. ಇದರ ಅಗಲ ಉತ್ತರದಲ್ಲಿ ಸುಮಾರು 249 ಕಿ.ಮೀ. ದಕ್ಷಿಣದಲ್ಲಿ 64 ಕಿ.ಮೀ: ಉದ್ದ 800 ಕಿ.ಮೀ. ವ್ಯಾಪ್ತಿ 65.000 ಚ.ಕಿ.ಮೀ. ಇಲ್ಲಿ ಕೆಲವು ಚಿಕ್ಕಪುಟ್ಟ ದ್ವೀಪಗಳಿವೆ. ಅಂಡಮಾನ್ ಸಮುದ್ರವನ್ನೂ (ಹಿಂದೂಮಹಾಸಾಗರ) ದಕ್ಷಿಣ ಚೀನ ಸಮುದ್ರವನ್ನೂ (ಪೆಸಿಫಿಕ್ ಸಾಗರ) ಇದು ಕೂಡಿಸುತ್ತದೆ. ಭಾರತ ಚೀನ ದೇಶಗಳ ನಡುವೆ ಅತ್ಯಂತ ಹತ್ತಿರದ ಸಾಗರಮಾರ್ಗ. ಪ್ರಪಂಚದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಜಲಸಂಧಿಗಳ ಪೈಕಿ ಇದೂ ಒಂದು. ಮಲಯ ಪರ್ಯಾಯ ದ್ವೀಪದಲ್ಲಿ ಈ ಜಲಸಂಧಿಯ ತೀರಕ್ಕೆ ಸೇರಿದಂತೆ ಸ್ಥಾಪಿತವಾಗಿದ್ದ ಪಟನಿ ಎಂಬ ಸ್ಥಳ 2ನೆಯ ಶತಮಾನದಲ್ಲಿ ಭಾರತದ ವ್ಯಾಪಾರಕೇಂದ್ರವಾಗಿತ್ತು. ಮುಂದೆ ಅರಬರೂ ತರುವಾಯ ಪೋರ್ಚುಗೀಸರೂ ಈ ಜಲಸಂಧಿಯನ್ನು ತಮ್ಮ ಅಧೀನಕ್ಕೆ ತೆಗೆದುಕೂಂಡರು. ಮಲಯಾ ಪರ್ಯಾಯದ್ವೀಪದ ನೈಋತ್ಯದಲ್ಲಿ ಪೋರ್ಚುಗೀಸರು ಸ್ಥಾಪಿಸಿದ್ದ ಇದೇ ಹೆಸರಿನ ಬಂದರು ನಗರದಿಂದ ಇದಕ್ಕೆ ಮಲಕ್ಕ ಜಲಸಂಧಿಯೆಂದು ಹೆಸರಾಯಿತು. 1641ರಲ್ಲಿ ಡಚ್ಚರು ಅನಂತರ ಇಂಗ್ಲಿಷರು ಇದನ್ನು ವಶಪಡಿಸಿಕೊಂಡರು. 1957ರಲ್ಲಿ ಮಲಯದ ಸ್ವಾತಂತ್ರ್ಯದೊಂದಿಗೆ ಈ ಜಲಸಂಧಿಯೂ ಬ್ರಿಟಿಷರ ಮುಷ್ಟಿಯಿಂದ ಮುಕ್ತವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ